Thursday, April 5, 2012

ನೀರಿಲ್ಲದ ಜೋಗಕ್ಕೆ ಸಂಗೀತ ಕಾರಂಜಿ ಮೆರುಗು.




ಜೋಗ ಜಲಪಾತ ಏಪ್ರಿಲ್ ಮೆ ತಿಂಗಳಿನಲ್ಲಿ ನೀರಿಲ್ಲದ ಕಾರಣ ನೀರಸ. ಜಲಪಾತದ ಮೆರುಗಿಲ್ಲದೆ ಪ್ರವಾಸಿಗರ ಕೊರತೆಯಿಂದ ಜೋಗ ಸೋರಗುತ್ತದೆ. ಈ ನಿಟ್ಟಿನಲ್ಲಿ ಜೋಗವನ್ನು ಸರ್ವ ಋತು ಪ್ರವಾಸೋದ್ಯಮ ತಾಣವನ್ನಾಗಿಸಲು ಜೋಗ ಅಭಿವೃದ್ಧಿ ಪ್ರಾಧಿಕಾರ ಸಂಗೀತ ಕಾರಂಜಿಯನ್ನು ನಿರ್ಮಿಸಿದೆ.
ಮಂಗಳವಾರದಿಂದ ಪ್ರಾಯೋಗಿಕವಾಗಿ ಸಂಗೀತ ಕಾರಂಜಿಯನ್ನು ಆರಂಭಿಸಿದ್ದಾರೆ. ಸಂಜೆ ೭-೧೫ ಪ್ರತಿ ನಿತ್ಯ ಸಂಗೀತ ಕಾರಂಜಿಯ ಕಾರ್ಯಕ್ರಮ ಆಯೋಜಿಸಲಾಗಿದೆ. ಪಶ್ಚಿಮ ಬಂಗಾಲದ ಪ್ರೀಮಿಯರ್ ವರ್ಲ್ಡ್ ಟೆಕ್ನಾಲಜಿ ಸಂಸ್ಥೆ ೧.೨೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕಾರಂಜಿಯನ್ನು ಶೀಘ್ರದಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಗುವುದು .
ಸಂಗೀತ ಕಾರಂಜಿಯು ಮೈಸೂರಿನ ಬೃಂದಾವನ ಮಾದರಿಯನ್ನು ಹೊಂದಿದ್ದು ಪ್ರವಾಸಿಗರ ಮನ ತಣಿಸುವಲ್ಲಿ ಯಶಸ್ವಿಯಾಗುವ ಭರವಸೆಯನ್ನು ಹೊಂದಿದೆ. ಕಾರಂಜಿಯಲ್ಲಿ ಮೂಡಿಬರುವ ಚಿತ್ರಗಳು ಹಾಗೂ ಅದಕ್ಕೆ ಹಿನ್ನಲೆ ಸಂಗೀತ ಜೋಗದ ಸಂಜೆಯನ್ನು ಮಧುರವನ್ನಾಗಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಲೇಸರ್ ತತ್ರಾಂಶ ಬಳಸಿ ಮೂಡಿಬರುವ ಚಿತ್ರಗಳಲ್ಲಿ ಕ್ರಿಕೆಟ್ ಪಟು ಸಚಿನ್ ತಂಡೂಲ್ಕರ್,ಪಿಟಿ ಉಷಾ, ಪಂಕಜ್ ಅಡ್ವಾಣಿ ಹಾಗೂ ರಾಷ್ಟ್ರನಾಯಕ ಚಿತ್ರಗಳು ಬೆರಗು ಮೂಡಿಸುತ್ತಿವೆ. ಮಳೆಗಾಲದಲ್ಲಿ ಜಲಪಾತದಿಂದ ಹಾಗೂ ಜಲಪಾತದಲ್ಲಿ ನೀರಿಲ್ಲದ ಬೇಸಿಗೆಯಲ್ಲಿ ಸಂಗೀತ ಕಾರಂಜಿಯಿಂದ ಪ್ರವಾಸಿಗರಿಗೆ ಕಣ್ಮನ ತಣಿಸುವ ನಿಟ್ಟಿನಲ್ಲಿ ಜೋಗ ಅಭಿವೃದ್ಧಿ ಪ್ರಾಧಿಕಾರ ಹೊಸ ಹೆಜ್ಜೆಯನ್ನು ಇಟ್ಟಿರುವುದು ಸ್ವಾಗತಾರ್ಹ.

Tuesday, March 20, 2012

ವಾವ್ ಅನ್ನದೇ ವಿಧಿಯಿಲ್ಲ

ಹೌದೇ ಹೌದು ಈಗ ನಮ್ಮೂರಿನ ಗುಡ್ಡದ ತುಂಬೆಲ್ಲಾ ಮುಳ್ಳಣ್ಣಿನದೇ ಶ್ರಾಯ. ಬೆಳ್ಳಬೆಳ್ಳಗೆ ಗೊಂಚಲು ಕೈಬೀಸಿ ಕರೆಯುತ್ತದೆ. ಹಗೂರ ತುದಿ ಹೆರೆ ಬಗ್ಗಿಸಿ ಒಂದೋಂದೇ ಬಿಳಿಬಿಳಿ ಹಣ್ಣು ತಿನ್ನುವ ಮಜ ತಿಂದವರಿಗೇ ಗೊತ್ತು. ಹಾಗಂತ ಈ ಮುಳ್ಳಣ್ಣು ಹಲಗೆ ಹಣ್ಣಿನಂತೆ ಬಾಯಲ್ಲಿ ಚೊಳ್ಳನೆ ನೀರು ಬರಿಸುವಷ್ಟು ರುಚಿಯದಲ್ಲ ಆದರೂ ವಿಶೇಷ ರುಚಿ ಖಂಡಿತಾ ಇದೆ ಬಿಡಿ. ಹಿಟ್ಟು ಹಿಟ್ಟು ಸಿಹಿ ಸಿಹಿ ವಾವ್ ಅನ್ನದೇ ವಿಧಿಯಿಲ್ಲ. ಬೇಸಿಗೆ ರಜದ ಮಜ ಮುಳ್ಳುಹಣ್ಣಿಗೆ ಗುಡ್ಡ ಅಲೆಯುವುದರಲ್ಲಿ ಇದೆ. ಅದು ಜೀವನಪೂರ್ತಿ ನೆನಪಿರುತ್ತದೆ. ಮೊನ್ನೆ ಅಮರ ಬಂದಿದ್ದ. ಅವನಿಗೆ ಇಲ್ಲಿ ಜಾಗ ಖರೀದಿ ಮಾಡುವ ಮನಸ್ಸಾಗಿದೆ. ಅವನು ನೋಡುತ್ತಿದ್ದ ಜಾಗದಲ್ಲಿ ಈ ಹಣ್ಣು ಇತ್ತು ಅವನು ತಾನು ತಿಂದ ಹಳೇ ನೆನಪಿಗೆ ಜಾರಿದ. ಹಾಗಿದೆ ಬಿಡಿ ಗುಡ್ಡ ಸುತ್ತಿ ಹಣ್ಣು ಅದರಲ್ಲಿಯೂ ಕಾಡು ಹಣ್ಣು ತಿನ್ನುವ ಮಜ. ಅದು ಚಿಕ್ಕಂದಿನ ಸ್ಕೂಲಿನ ದಿನ ನೆನಪಿಸುತ್ತದೆ. ಆವಾಗಿನ ಮಜ ಯಾವತ್ತೂ ಮತ್ತೆ ಮತ್ತೆ ಮರುಕಳಚುತ್ತದೆ. ಅದೇ ರುಚಿ ನಾಲಿಗೆಗೆ ಬಿದ್ದಾಗ.

Thursday, March 15, 2012

ಅಂದು ನೋಡೋಣ..



ಮೊದಲಿನ ಫೋಟೋ ಇವತ್ತು ತೆಗದದ್ದು. ಎರಡನೇ ಫೋಟೋ ಕಳೆದ ವರ್ಷ ಇದೇ ತಿಂಗಳು ಇದೇ ದಿನಾಂಕದ್ದು. ಒಂದು ವರ್ಷದಲ್ಲಿ ಇಷ್ಟಾಗಿದೆ. ಮುಂದಿನ ವರ್ಷ ಅಂದು ನೋಡೋಣ..



Friday, March 9, 2012

ಅದು ಮತ್ತೊಂದು ತರ

ವಿಜಯವಾಣಿ ಎಂಬ ಹೆಸರು ವಿಜಯ ಸಂಕೇಶ್ವರ ಅದರ ಒಡೆಯ ಎಪ್ರಿಲ್ ೨ ನೇ ತಾರೀಕು ಬಿಡುಗಡೆ. ಶಶಿ ಸಂಪಳ್ಳಿ ಶಿವಮೊಗ್ಗ ಬ್ಯೂರೋ ಚೀಫ್, ದೀಪಕ್ ಸಾಗರ್ ಸಾಗರ ಸ್ಟ್ರಿಂಜರ್. ಇಷ್ಟೆಲ್ಲಾ ಯಾಕೆ ಹೇಳುತ್ತೀದ್ದೀನೆಂದರೆ ನಾನೂ ಕೂಡ ತಾಳಗುಪ್ಪ-ಕಾರ್ಗಲ್-ಜೋಗ ಕ್ಕೆ ಸ್ಟ್ರಿಂಜರ್ ಆಗಿ ಸೇರುವ ಇರಾದೆ ಹೊಂದಿದ್ದೇನೆ.
ಬರಹದ ಪ್ರಪಂಚವೇ ಹಾಗೆ ಬಿಟ್ಟಿರಲು ಆಗದು ಹಾಗೂ ಬಿಡಲೂ ಬಾರದು. ಕಾರಣ ನಾನೇ ಜ್ವಲಂತ ಸಾಕ್ಷಿ. ನಾನು ವರದಿಗಾರನಾಗಿ ಸಂಕೇಶ್ವರರ ಉಷಾಕಿರಣದಲ್ಲಿದ್ದಾಗ ನಿತ್ಯ ಹತ್ತು ಹಲವು ನ್ಯೂಸು ಕುಟ್ಟಿದ್ದೆ. ಉಷಾಕಿರಣ ಎಂದು ಬಂದ್ ಆಯಿತೋ ಅಲ್ಲಿಗೆ ನಾನು ಕೂಡ ವರದಿಗಾರನಾಗಿ ಬಂದ್ ಆದೆ. ಅಲ್ಲಿಂದ ಶುರುವಾಯಿತು ನೋಡಿ ಸಮಸ್ಯೆ. ನಾನು ವರದಿಗಾರನಾಗಿದ್ದಾಗ ಕುಟ್ಟಿದ್ದ ನ್ಯೂಸಿನ ಎಲ್ಲಾ ಪಾತ್ರಧಾರಿಗಳೂ ಬೆನ್ನೆತ್ತಿ ಕಾಡತೊಡಗಿದವು.
ಈಗ ಅವರುಗಳ ಕಾಟ ತಪ್ಪಿಸಿಕೊಳ್ಳಲಾದರೂ ಮತ್ತೆ ವರದಿಗಾರನಾಗಬೇಕು. ಪ್ರಪಂಚವೇ ಹಾಗೆ ರೌಡಿ ಯಿಂದ ಹಿಡಿದು ಪೋಲೀಸ್ ರ ವರಗೂ ಅಧಿಕಾರ ಹೋದಮೇಲೆ ಕಷ್ಟ ಕಷ್ಟ ಕಷ್ಟ. ಹಾಗಂತ ಅದಿದ್ದಾಗ ಸುಖ ಅಂತಲ್ಲ. ಅದು ಮತ್ತೊಂದು ತರ. ಒಟ್ಟಿನಲ್ಲಿ ಯಾವುದೂ ನಮ್ಮ ಕೈಯಲ್ಲಿಲ್ಲ.

Saturday, February 18, 2012

ಪುಕ್ಕಟೆ ಪೀಪಿ




ವಾವ್ ಅಂತ ಅನ್ನದಿರಲು ಆಗದಲ್ಲ ಈ ಹಸಿರಾಗುವ ಕೆಂಪು ನೋಡಿ. ಇರಲಿ ಆಮೇಲೆ ವಾವ್ ಅಂದರೂ ಆದೀತು ಈಗ ಇದರ ಒಂದು ಸಣ್ಣ ಮಜ ನೋಡೋಣ. ಇದು ಅರಳಿಮರದ ಚಿಗುರು. ಕಲ್ಲಿನ ಸಂದಿಯಲ್ಲಿ ಹುಟ್ಟಿದ್ದರಿಂದ ಕಲ್ಲರಳಿ ಅಂತಲೂ ಅನ್ನಬಹುದು. ಹಾಗಂತ ಕಲ್ಲು ಅರಳುವುದು ಅಂದರೆ ಅರ್ಥವೇ ಇಲ್ಲ ಹಾಗಾಗಿ ಇಲ್ಲಿ ಕಲ್ಲು ಮತು ಅರಳಿ ಬೇರೆ ಬೇರೆ.

ನಿಮ್ಮ ಮನೆಯ ಮುದ್ದು ಕಂದನಿಗೆ ಪೇಟೆಗೆ ಹೋದಾಗ ಅಲ್ಲಲ್ಲ ಶಾಪಿಂಗ್ ಗೆ ಹೋದಾಗ ಪೀ......ಎನ್ನುವ ಪೀಪಿ ಖರೀದಿ ಮಾಡಿದ್ದುಂಟು. ನೀವೂ ಕೂಡ ಬಾಲ್ಯದಲ್ಲಿ ಅದಕ್ಕಾಗಿ ವರಾತ ಮಾಡಿದ್ದು ನನಗೇನು ಎಲ್ಲರಿಗೂ ಗೊತ್ತಿದೆ ಬಿಡಿ. ಈಗ ಈ ಅರಳಿ ಚಿಗುರಿನ ವಿಷಯಕ್ಕೆ ಬರೋಣ. ಚೂಪನೆಯ ಚಿಗುರು ಕಾಣಿಸುತ್ತಿದೆಯಲ್ಲ ಅದನ್ನು ಉಗುರಿನಿಂದ ನಯವಾಗಿ ಚಿವುಟಿ ಸಣ್ಣದಾಗಿ ಕೈಗೆ ಬರುವ ಕಹಳೆಯನ್ನು ನಾಲಿಗೆಯ ಮೇಲಿಟ್ಟುಕೊಂಡು ಉಸಿರು ಒಳಗೆ ತೆಗೆದುಕೊಂಡರೆ ಪಕ್ಕಾ ಪಕ್ಕಾ ಹಕ್ಕಿಯ ಮರಿಯ ದನಿ ಹೊರಡುತ್ತದೆ. ಆಗ ಎರಡೂ ಕೈಯನ್ನು ಗೂಡಾಗಿ ಹಿಡಿದುಕೊಂಡರಂತೂ ನೋಡುಗರಿಗೆ ಕೈಯಲ್ಲಿ ಹಕ್ಕಿ ಮರಿ ಕಿವಿಗೆ ಮರಿಯ ಕೂಗಿನ ಸದ್ದು. ಒಮ್ಮೆ ಎಲ್ಲರೂ "ಅಯ್ಯೋ ಪಾಪ. ಮರಿ ಹಕ್ಕಿ ಬಿಡ ಬಿಡ" ಅನ್ನೋದು ಗ್ಯಾರಂಟಿ ಕೈಯಲ್ಲಿ ಗೋರಂಟಿ ಇದ್ದರಂತೂ ಇನ್ನೂ ಇನ್ನೂ ಗ್ಯಾರಂಟಿ

ಒಟ್ಟಿನಲ್ಲಿ ನಾನು ಏನು ಹೇಳಲು ಹೊರಟಿದ್ದೇನೆಂದರೆ ಪ್ರಕೃತಿ ನಮಗೆ ಪುಕ್ಕಟೆ ಪೀಪಿ ದಯಪಾಲಿಸಿದೆ ಅದಕ್ಕಾಗಿ ಹಣ ವ್ಯಯಿಸಬೇಡಿ. ಗುಡ್ ಡೆ.

Monday, February 6, 2012

ತುಸು ಕಷ್ಟದ್ದು ಅಂತ ನಿಮಗೂ ಅನಿಸಿರಬೇಕಲ್ಲ

ತರ್ಕಕ್ಕೆ ನಿಲುಕದ ವಿಷಯಗಳು ಒಮ್ಮೊಮ್ಮೆ ಜೀವನದಲ್ಲಿ ಘಟಿಸಿಬಿಡುತ್ತವೆ. ಅದು ಆ ಕ್ಷಣದ ಅನುಭವ ಅಂತ ಸುಮ್ಮನೆ ತಳ್ಳಿಹಾಕಲೂ ಆಗದು ಹಾಗಂತ ಅದಕ್ಕೆ ಜೋತುಬಿದ್ದು ಹಗಲಿರುಳೂ ಅದೇ ಜಪ ಮಾಡುತ್ತ ಕುಳಿತಿರಲೂ ಆಗದು ಅಂತ ಒಂದು ಮಜದ ಘಟನೆ ಕೇಳಿ ಅಲ್ಲಲ್ಲ ಓದಿ.


ಭಾನುವಾರ, ಕಟ್ಟಿಸುತ್ತಿರುವ ಮನೆಯೆದುರು ಕುಳಿತಿದ್ದೆ. ಕಾನ್ಲೆ ವೆಂಕಟಾಚಲ ಹಿಟಾಚಿ ಕೆಲಸ ನೋಡಿ ಹೋಗಲು ಬಂದಿದ್ದ. ನಾನೂ ಅವನು ಕೆಲಸದ ಕುರಿತು ಮಾತನಾಡುತ್ತಾ ಕುಳಿತಿದ್ದಾಗ ರಸ್ತೆಯಲ್ಲಿ ಹಳದಿ ಬಟ್ಟೆ ಧರಿಸಿದ ವ್ಯಕ್ತಿಯೊಬ್ಬ ನಡೆದು ಹೋದ. ಆತ ಬಹುಷ: ಭಿಕ್ಷುಕ ಅಂತ ನನಗೆ ಅನಿಸಿತು. ಆತ ಮುಂದೆ ಹೋಗಿ ನಮ್ಮ ಹೊಸಮನೆಯ ಮೈನ್ ಗೇಟಿನೊಳಕ್ಕೆ ನುಸುಳಿ ಒಳಗೆ ಬರತೊಡಗಿದ. ಅದನ್ನು ಗಮನಿಸಿದ ವೆಂಕಟಾಚಲ ದೊಡ್ಡ ದನಿಯಲ್ಲಿ " ಏಯ್ ಇಲ್ಲಿ ಯಾರೂ ಒಕ್ಕಲು ಇಲ್ಲ, ಮುಂದೆ ಹೋಗು" ಎಂದ. ಅದಕ್ಕೆ ಆತ "ಯಾರೂ ಬರಬಾರದು ಅಂತ ಮನೆ ಕಟ್ಟಿಸಿದ್ದೀರಾ..?" ಎಂದು ಗಢಸು ದನಿಯಲ್ಲಿ ಕೇಳುತ್ತಾ ಮುಂದೆ ಬರತೊಡಗಿದ. ಆತನ ಆ ದನಿ ನನಗೆ ಅದೇಕೋ ಭಿಕ್ಷುಕನ ದನಿ ಅಲ್ಲ ಅನಿಸಿತು. ಜಂಗಮ ಇರಬಹುದಾ ಅಂತಲೂ ಅನಿಸಿತು, ಆದರೂ ನಾನು ಆತನ ಬಗ್ಗೆ ಗಮನ ಕೊಡದೆ ಬೇರೇನೋ ಯೋಚಿಸುತ್ತಿದ್ದೆ. ಆದರೆ ವೆಂಕಟಾಚಲ ಅವನ ಬೆನ್ನು ಹತ್ತತೊಡಗಿದ. ಅದೂ ಇದೂ ಹಾಗೇ ಹೀಗೆ ಅಂತಿದ್ದ. ಆತ ವೆಂಕಟಾಚಲನ ಮಾತಿಗೆ ಆತ ಉತ್ತರ ಕೊಡುವ ಗೋಜಿಗೆ ಹೋಗದೆ ಸೀದಾ ನನ್ನ ಬಳಿ ಬರತೊಡಗಿದ . ಆತ ತೀರಾ ಹತ್ತಿರವಾದಾಗ ವೆಂಕಟಾಚಲ " ಏಯ್ ನನಗೆ ಮದುವೆಯಾಗಬೇಕು, ಹೆಣ್ಣು ಸಿಗುತ್ತಾ..? ಯಾವಾಗ ಸಿಗುತ್ತೆ?" ಹೇಳು ಅಂತ ಕಿಚಾಯಿಸಿದ. ಅದಕ್ಕೆ ಆತ " ಶ್ರೀ ಕೃಷ್ಣ ಪರಮಾತ್ಮನಿಗೆ ಹದಿನಾರು ಸಾವಿರ ಹೆಂಡಿರು, ನಿನಗೆ ಎಷ್ಟು ಬೇಕು..?" ಅಂತ ಕೇಳಿ ನನ್ನೆದುರು ಬಂದು ನಿಂತು


ನೀನು ಕರೆದಲ್ಲಿಗೆ ಗಂಗೆ ಬಂದಿದ್ದಾಳೆ-ಈ ಜಾಗಕ್ಕೆ ಇಲ್ಲಿನ ಕೆಲಸಕ್ಕೆ ತೊಂದರೆ ಕೊಡಬೇಕು ಅಂತ ಎಂಟು ಜನ ಕೋರ್ಟು ಕಛೇರಿ ಅಂತ ಗಂಟು ಬಿದಿದ್ದಾರೆ ಆದರೆ ನಿನ್ನ ಪ್ರಾಮಾಣಿಕತೆಯಿಂದ ಸತ್ಯ ಧರ್ಮ ದಿಂದ ನಿನ್ನ ರೋಮವನ್ನೂ ಅಲುಗಾಡಿಸಲಾಗಲಿಲ್ಲ". ನಾನು ಇವೆಲ್ಲಾ ಒಗಟಿನ ತರಹದ ಮಾಮೂಲು ಮಾತು ಅಂತ ಸುಮ್ಮನುಳಿದೆ, ಆದರೆ ವೆಂಕಟಾಚಲ " ಏಯ್ ಇವ ಈ ತರಹ ನೂರಕ್ಕೆ ನೂರು ಹೇಳ್ತಾನಲ್ಲ ಮಾರಾಯ, ನಾನು ಕಿಚಾಯಿಸಿದ್ದು ತಪ್ಪಾಯ್ತಾ..?" ಅಂತ ನನ್ನ ಬಳಿ ಕೇಳಿದ. ಅದಕ್ಕೆ ಆತ " ನಾನು ಉಕ್ಕಡಗಾತ್ರಿಯಿಂದ ಬಂದ ಜಂಗಮ, ದಾರಿಯಲ್ಲಿ ಹೋಗುತ್ತಾ ಇದ್ದೆ. ಬರಬೇಕು ಅಂತ ಅನಿಸಿತು ಬಂದೆ, ಹೇಳು ಅಂತ ಅಪ್ಪಣೆಯಾಯಿತು ಹೇಳುತ್ತಾ ಇದ್ದೇನೆ " ಎಂದು ಹೇಳಿ ನನ್ನತ್ತ ಕೈಮಾಡಿ " ಇಂಥವರ ಮುಕಾಂತರ ಜಮೀನು ವ್ಯವಹಾರ ಮಾಡಿದ್ದೀಯ, ಸಮಾಧಾನವಾಗಿ ಬಗೆ ಹರಿಸಿಕೋ" ಎಂದು ವೆಂಕಟಾಚಲನ ಬಳಿ ಹೇಳಿದ. ಈ ಬಾರಿ ವೆಂಕಟಾಚಲ ಎಚ್ಚರ ತಪ್ಪಿ ಬೀಳುವುದೊಂದೇ ಬಾಕಿ, ಕಾರಣ ವೆಂಕಟಾಚಲ ನನ್ನ ಮೂಲಕ ಒಂದು ಜಮೀನು ಖರೀದಿಸಿ ಅದು ಸ್ವಲ್ಪ ಜಡಕಾಗಿತ್ತು. ನಂತರ ಮುಂದುವರೆದ ಜಂಗಮ ನನ್ನ ಬಳಿ " ಪೂರ್ವ ದಿಕ್ಕಿನಲ್ಲಿ ಒಂದು ಜಮೀನಿದೆ, ಅದು ಪಾಳು ಬಿದ್ದಿದೆ, ಪ್ರಯತ್ನಿಸು ನಿನ್ನವರಿಗೆ ಆಗುತ್ತೆ- ಒಳ್ಳೆಯವರೊಡನೆ ಸೇರಿ ಒಳ್ಳೆಯ ಕೆಲಸ ಮಾಡುತ್ತಾ ಇದ್ದೀಯ ಒಳ್ಳೆಯದೇ ಆಗುತ್ತೆ- ನಿನ್ನ ಏಳ್ಗತಿಯ ಮೇಲೆ ಜನರ ಕಣ್ಣಿನ ದೃಷ್ಟಿ ಇದೆ, ನೀನು ಅವನ್ನೆಲ್ಲಾ ನಂಬಲ್ಲ, ಆದರೆ ಹೊಟ್ಟೆಕಿಚ್ಚಿನ ಕಣ್ಣಿಗೆ ಕಲ್ಲು ತುಂಡು ಮಾಡುವ ಶಕ್ತಿಯಿದೆ ಹಾಗಾಗಿ ಕೇವಲ ಮಾಡಬೇಡ, ಒಂದು ಶಾಂತಿ ಮಾಡಿಸು" ಎಂದ. ಹಾಗಂದ ಕೂಡಲೇ ವೆಂಕಟಾಚಲ " ನಾನು ಮೊದಲೇ ಹೇಳಲಿಲ್ಲವಾ, ಇವರದ್ದು ಶುರು ಆಯಿತು ನೋಡು ಶಾಂತಿ ಗೀಂತಿ ಅಂತ ದುಡ್ದು ಹೊಡೆಯುವ ತಂತ್ರ" ಎಂದು ಮತ್ತೆ ಕಿಚಾಯಿಸಿದ. ಅದಕೆ ಜಂಗಮ "ಇಲ್ಲ ಇದು ಹಣ ಖರ್ಚುಮಾಡಿ ಮಾಡುವ ಶಾಂತಿಯಲ್ಲ ಗೋಮೂತ್ರ ಮನೆಯ ಸುತ್ತ ಸಿಂಪಡಿಸು ಅಷ್ಟೆ ಎಂದು ಹೇಳಿ ಉಕ್ಕಡಗಾತ್ರಿಯಲ್ಲಿ ನನ್ನದೊಂದು ಪುಟ್ಟ ಗೋ ಶಾಲೆಯಿದೆ ಧನ ಸಹಾಯ ಮಾಡುವುದಾದರೆ ಮಾಡಿ ಎಂದು ಫೋಟೋ ತೋರಿಸಿದ, ನಾನಷ್ಟು ಕೊಟ್ಟೆ ವೆಂಕಟಾಚಲನೂ ಅಷ್ಟು ಕೊಟ್ಟ. ತಕ್ಷಣ ಹೊರಟು ನಿಂತ ಜಂಗಮ " ಮುಂದಿನ ವರ್ಷ ಇದೇ ಸಮಯಕ್ಕೆ ಬರುತ್ತೇನೆ ನಾನು ಹೇಳಿದ್ದು ಸತ್ಯವಾದರೆ ಧರ್ಮ ಮಾಡು, ಸುಳ್ಳಾದರೆ ಅಟ್ಟು ಎನ್ನುತ್ತಾ ಹೊರಟ. ಆಗ ವೆಂಕಟಾಚಲ ಮತ್ತೆ " ನನಗೆ ಹೆಣ್ಣು ಸಿಗುತ್ತೇನೋ..?" ಎಂದು ಕೇಳಿದ. ಅದಕ್ಕೆ ಆತ " ಸರಿಯಪ್ಪಾ ನಿನಗೆ ನಾನು ಹದಿನಾರು ದಿವಸದಲ್ಲಿ ಹೆಣ್ಣು ಕೊಡಿಸುತ್ತೇನೆ, ಆದರೆ ಇರುವ ಹೆಂಡತಿಯನ್ನು ಏನು ಮಾಡುತ್ತೀಯಾ?, ಸುಮ್ಮನೆ ಬೇಡದ್ದನ್ನೆಲ್ಲಾ ಕೇಳಬೇಡ " ಎನ್ನುತ್ತಾ ಬಿರಬಿರನೆ ನಡೆದ. ವೆಂಕಟಾಚಲ ಅಡ್ಡಬೀಳುವುದೊಂದು ಬಾಕಿ.


ಇದು ಘಟನೆ. ಇಲ್ಲಿ ಅತಿಶಯೋಕ್ತಿ ಇಲ್ಲ. ನಡೆದದ್ದನ್ನು ನಡೆದಂತೆ ನಿಮ್ಮ ಮುಂದೆ ಹಂಚಿಕೊಂಡಿದ್ದೇನೆ. ಜಂಗಮ ಹೇಳಿದ ಅಷ್ಟೂ ನೂರಕ್ಕೆ ನೂರು ಸತ್ಯ, ಆತ ಹೇಳಿದ ಮಾತು" ಗಂಗೆ ನೀನು ಕರೆದಲ್ಲಿಗೆ ಬಂದಿದ್ದಾಳೆ" ಎಂಬುದೂ ಕೂಡ. ನಾವು ತೆಗೆಯಿಸಿದ ಬೋರ್ ವೆಲ್ ನಿರಂತರ ನೀರಿನ ಬುಗ್ಗೆಯಾಗಿ ಚಿಮ್ಮುತ್ತಿದೆ. ಇದು ತರ್ಕಕ್ಕೆ ನಿಲುಕದ್ದು, ನಾನಾಗಿಯೇ ಹುಡುಕಿ ಹೋಗಿ ಅಂಗೈ ಕೊಟ್ಟದ್ದಲ್ಲ. ಒಂದು ಘಟನೆ ಅಷ್ಟೆ. ಸತ್ಯವೋ ಸುಳ್ಳೋ ವಿಮರ್ಶೆ ತುಸು ಕಷ್ಟದ್ದು ಅಂತ ನಿಮಗೂ ಅನಿಸಿರಬೇಕಲ್ಲ....?




Tuesday, January 31, 2012

ಮುಂದೆ ಹೀಗೆ ಕುಟ್ಟಬಹುದು..



ವಿದ್ಯಾರ್ಥಿ ಜೀವನ ಬಂಗಾರದ್ದಂತೆ, ಆದರೆ ಅದು ಬಂಗಾರದ್ದು ಅಂತ ತಿಳಿಯುವುದು ಆ ಜೀವನ ಮುಗಿದಮೇಲೆಯೇ ಅಂತೆ. ಹೌದೇ ಹೌದು. ಈ ಪಟದಲ್ಲಿನ ಮುದ್ದು ಮುದ್ದು ಮಕ್ಕಳು ಹಣೆಯಮೇಲೆ ಕೈಯಿಟ್ಟು ನಿಂತದ್ದು ನೋಡಿದಾಗ ನಮಗೆ ನಿಮಗೆ ಹಾಗನ್ನಿಸುವುದು ನಿಜ. ಆದರೆ ನಾವು ನೀವೂ ಕೂಡ ಹೀಗೆ ಒಂದು ದಿನ ಹಣೆಯಮೇಲೆ ಕೈಯಿಟ್ಟು ಜೈ ಎಂದಿದ್ದಿದೆ. ಒಮ್ಮೆ ಕಷ್ಟಪಟ್ಟು ಆ ದಿನಗಳನ್ನು ನೆನಪಿಸಿಕೊಳ್ಳಿ. ಎಂತಾ ಮಜ ಈಗ ಅಲ್ಲವೇ?. ಹಾಗಾದರೆ ಅಂದು...?

ಥೂ ತಲೆಕೆಟ್ಟು ಹೋಗುತ್ತಿತ್ತು. ಸಾಲಾಗಿ ಒಬ್ಬರ ಹಿಂದೆ ಒಬ್ಬರು ಹೋಗಬೇಕಿತ್ತು. ಮಾಸ್ತರುಗಳೋ ನಮ್ಮನ್ನು ಗದರಿಸಲು ಭಗವಂತ ತಯಾರಿಸಿದ ಯಂತ್ರಗಳಂತೆ ಭಾಸವಾಗುತ್ತಿತ್ತು. ಗಣರಾಜ್ಯೋತ್ಸವವಾದರೆ ಕೊಂಚ ಅಡ್ಡಿಲ್ಲ ಚಳಿ ಚಳಿ ಅಷ್ಟೆ. ಆ ಆಗಸ್ಟ್ ಹದಿನೈದೋ ಭಗವಂತನಿಗೇ ಪ್ರೀತಿ. ನೀವು ಪಟ್ಟಣದಲ್ಲಿ ಓದಿದ ಜನ ಆಗಿದ್ದರೆ ನಿಮಗೆ ಕಪ್ಪುಸುಂದರಿ ಟಾರ್ ರಸ್ತೆಯಮೇಲೆ ನಡಿಗೆ, ನಮಗೆ ಅಮ್ಮಾ... ಕೆಸರು ಕಿಚಕಿಚ ಅದರ ನಡುವೆ ನಮ್ಮ ಪ್ರಭಾತ್ ಪೇರಿ. "ಸಾಗಿ ಮುಂದೆ ಭಾರತೀಯರ ಹಿಂದೆ" ಹಾಡು ಯಾರಿಗೆ ಬೇಕಿತ್ತು..?. ಎರಡು ಕಿಲೋಮೀಟರ್ ಕೆಸರಿನಲ್ಲಿ ಸಾಲಾಗಿ ಸುತ್ತಿ ವಾಪಾಸು ಚಡ್ಡಿಯನ್ನೆಲ್ಲಾ ಒದ್ದೆ ಮುದ್ದೆ ಮಾಡಿಕೊಂಡು ರೂಂ ನಲ್ಲಿ ಕಿಚಿಪಿಚಿಯಲ್ಲಿ ಕುಳಿತು ಕುಟ್ಟುವ ಭಾಷಣ ಕೇಳಬೇಕಿತ್ತು. ಅದನೂ ಅರ್ಥವೇ ಆಗುತ್ತಿರಲಿಲ್ಲ. ಪ್ರತೀ ಬಾರಿಯೂ ಅದೇ ರಾಗ ಅದೇ ಹಾಡು, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ದೇಶಕ್ಕಾಗಿ ನಾವು ತ್ಯಾಗ ಮಾಡಬೇಕು... ಹೀಗೆ ದೊಡ್ಡವರೆನಿಸಿಕೊಂಡ ದೊಡ್ಡ ಜನ ತಮ್ಮ ಮನಸ್ಸೋ ಇಚ್ಛೆ ಕೊರೆಯುತ್ತಿದ್ದುದನ್ನು ಗಲಾಟೆ ಮಾಡದೇ ಆಲಿಸಬೇಕಿತ್ತು. ಅಪ್ಪಿ ತಪ್ಪಿ ಪಿಟಕ್ ಎಂದರೆ ಮನೆಯಲ್ಲಿ ಹೆಂಡತಿ ಕೈಯಲ್ಲಿ ಉಗಿಸಿಕೊಂಡು ಸಿಟ್ಟು ತೀರಿಸಿಕೊಳ್ಳಲು ಹಪಹಪಿಸುತ್ತಿರುವ ಮಾಸ್ತರರ ಕೋಲಿಗೆ ಆಹುತಿ. ಆದರೂ ಇದರ ನಡುವೆ ಎನೋ ಒಂದು ಸಂಭ್ರಮ ಇತ್ತು ಅಂತ ಈಗ ಅನ್ನಿಸುತ್ತಿದೆ.

ಮೊನ್ನೆ ೨೬ ನೇ ತಾರೀಕು ಅದೇ ಹಳೆಯ ವಾಕ್ಯಗಳು ಅಂದಿನ ಮಕ್ಕಳಿಂದ ಇಂದಿನ ಮಕ್ಕಳಿಗೆ ಕೊರೆಯಲ್ಪಟ್ಟಾಗ ಛೆ ಅಂತ ಅನ್ನಿಸಿದ್ದು ಸುಳ್ಳಲ್ಲ. ಆ ಇಂದಿನ ಮಕ್ಕಳಲ್ಲಿ ಒಬ್ಬಿಬ್ಬರಾದರೂ ಮುಂದೆ ಹೀಗೆ ಕುಟ್ಟಬಹುದು.. ಬಂಗಾರದ......